ನೀರುನಾಯಿ
	ಕಾರ್ನಿವೊರ ಗಣದ ಮಸ್ಟೆಲಿಡೀ ಕುಟುಂಬಕ್ಕೆ ಸೇರಿದ ಮಾಂಸಾಹಾರಿ ಜಲವಾಸಿ ಸ್ತನಿ (ಆಟರ್). ಇದರಲ್ಲಿ ಹಲವಾರು ಜಾತಿ ಹಾಗೂ ಪ್ರಭೇದಗಳುಂಟು. ಟೀರೊನ್ಯೂರ ಬ್ರಸಿಲಿಯೆನ್ಸಿಸ್ ಎಂಬುದು ದಕ್ಷಿಣ ಅಮೆರಿಕದಲ್ಲೂ ಅಯೋನಿಕ್ಸ್ ಮತ್ತು ಪ್ಯಾರವೋನಿಕ್ಸ್ ಎಂಬುದು ಆಫ್ರಿಕದ ಬಹುಭಾಗಗಳಲ್ಲೂ ಲುಟ್ರ ಎಂಬುದು ಭಾರತ, ಯೂರೋಪ್, ಕೆನಡ, ಅಮೆರಿಕ ಸಂಯುಕ್ತ ಸಂಸ್ಥಾನ, ದಕ್ಷಿಣ ಅಮೆರಿಕ, ಉತ್ತರ ಆಫ್ರಿಕ, ಏಷ್ಯಖಂಡದ ಬಹುತೇಕ ದೇಶಗಳಲ್ಲೂ ಆಂಬ್ಲೊನಿಕ್ಸ್ ಎಂಬುದು ಭಾರತ, ದಕ್ಷಿಣ ಚೀನ, ಆಗ್ನೇಯ ಏಷ್ಯಗಳಲ್ಲೂ ಕಾಣದೊರೆಯುವುವು. ಭಾರತದಲ್ಲಿನ ನೀರುನಾಯಿಗಳ ಪ್ರಭೇದಗಳು ಇಂತಿವೆ: ಕಾಶ್ಮೀರ ಹಿಮಾಲಯ, ಅಸ್ಸಾಮ್, ದಕ್ಷಿಣ ಭಾರತಗಳಲ್ಲಿ ಸಿಕ್ಕುವ ಲುಟ್ರ ಲುಟ್ರ 2 ಭಾರತದ ಮೈದಾನ ಪ್ರದೇಶಗಳಲ್ಲಿ ಕಾಣಸಿಗುವ ಲುಟ್ರ ಪಸ್ರ್ಪಿಸಿಲೇಟ, 3 ಕುಲು ಕಣಿವೆಯಿಂದ ಅಸ್ಸಾಮ್ ಬೆಟ್ಟಗಳವರೆಗೆ ಪ್ರಸರಿಸಿದಂತೆ ಹಿಮಾಲಯದ ತಪ್ಪಲಿನ ಬೆಟ್ಟಗಳಲ್ಲಿ, ಕರ್ನಾಟಕದ ಕೊಡಗು, ತಮಿಳುನಾಡಿನ ನೀಲಗಿರಿ ಬೆಟ್ಟಗಳು, ಪಳನಿ ಬೆಟ್ಟಗಳಲ್ಲಿ ಸಿಕ್ಕುವ ಅಯೋನಿಕ್ಸ್ ಸಿನರಿಯ.

	ಸಣ್ಣಪುಟ್ಟ ವ್ಯತ್ಯಾಸಗಳನ್ನು ಬಿಟ್ಟರೆ ಎಲ್ಲ ಬಗೆಯ ನೀರುನಾಯಿಗಳೂ ಒಂದೇ ತೆರನಾಗಿವೆ. ಎಲ್ಲಕ್ಕೂ ಮಾದರಿಯಾಗಿ ಲುಟ್ರ ಲುಟ್ರವನ್ನು (ಸಾಮಾನ್ಯ ನೀರುನಾಯಿ) ವಿವರಿಸಲಾಗಿದೆ. ಇದು 60-80 ಸೆಂಮೀ. ಉದ್ದದ ಪ್ರಾಣಿ. ಇದಕ್ಕೆ 45 ಸೆಂಮೀ. ಉದ್ದದ ಬಾಲವುಂಟು. ಹೆಚ್ಚು ಕಡಿಮೆ ಮುಂಗುಸಿಯಂತೆ ಕಾಣುತ್ತದೆಯಾದರೂ ಇದಕ್ಕೂ ಮುಂಗುಸಿಗೂ ವ್ಯತ್ಯಾಸಗಳುಂಟು. ಮುಂಗುಸಿ ನೆಲವಾಸಿ. ನೀರುನಾಯಿಯಾದರೋ ಹೆಚ್ಚಾಗಿ ಜಲವಾಸಿ. ಅಂತೆಯೇ ನೀರುನಾಯಿಯ ದೇಹದಲ್ಲಿ ಜಲಜೀವನಕ್ಕೆ ಅನುಕೂಲವಾಗಿರುವ ಅನೇಕ ಲಕ್ಷಣಗಳನ್ನು ಕಾಣಬಹುದು. 
ದೇಹ ಉರುಳೆಯಂತಿದ್ದು ಸುಲಭವಾಗಿ ಬಳಕುತ್ತದೆ. ಅಗಲವಾದ ಹಾಗೂ ಚಪ್ಪಟೆಯದ ತಲೆ ಇದಕ್ಕುಂಟು. ಇದರಿಂದಾಗಿ ನೀರಿನಲ್ಲಿ ಸರಾಗವಾಗಿ ನುಗ್ಗಿ ಈಜಲು ಅನುಕೂಲವಾಗಿದೆ. ದೇಹದ ಮೇಲೆಲ್ಲ ಒತ್ತೊತ್ತಾಗಿರುವ ನಯವಾಗಿರುವ ಜಲವಿರೋಧಿ ತುಪ್ಪುಳಿನ ಹೊದಿಕೆಯುಂಟು. ಬಾಲ ದಪ್ಪವೂ ಸ್ನಾಯುಯುತವೂ ಆಗಿದೆ. ಪಾದಗಳು ಹುಟ್ಟಿನಂತೆ ಇವೆ (ಬೆರಳುಗಳ ನಡುವೆ ಚರ್ಮದ ಜಾಲವುಂಟು). ಮುಂಗಾಲುಗಳು ಹಿಂಗಾಲುಗಳಿಗಿಂತ ಚಿಕ್ಕವು. ಕಿವಿಗಳು ಚಿಕ್ಕವು. ನಾಸಿಕರಂಧ್ರಗಳಿಗೆ ನೀರು ಒಳನುಗ್ಗದಂತೆ ತಡೆಯುವ ಕವಾಟಗಳಿವೆ. ಮೀಸೆಗಳು ತಂತಿಯಂತೆ ಬಿರುಸಾಗಿವೆ. ಸಂವೇದನಾಶೀಲವಾದ ಇವುಗಳ ಸಹಯದಿಂದ ನೀರುನಾಯಿ ಮೀನುಗಳ ಇರವನ್ನು ಪತ್ತೆಹಚ್ಚಬಲ್ಲದು. ಇದರ ಅಂಗಾಲುಗಳು ಕೂಡ ತುಂಬ ಸೂಕ್ಷ್ಮಗ್ರಾಹಿಗಳಾಗಿವೆಯಾಗಿ ನದಿಯ ತಳದ ಉಸುಕಿನಲ್ಲಿ ಹುದುಗಿರಬಹುದಾದ ಮೀನುಗಳನ್ನು ಸಲೀಸಾಗಿ ಪತ್ತೆಮಾಡಬಲ್ಲದು. ಮೀನುಗಳ ಮೈ ಬಲು ನುಣುಪಾಗಿರುವುದರಿಂದ ಇವನ್ನು ದೃಢವಾಗಿ ಹಿಡಿದುಕೊಳ್ಳಲು ಅನುವಾಗುವಂತೆ ನೀರುನಾಯಿಯ ಹಲ್ಲುಗಳಲ್ಲಿ ಚೂಪಾದ ಹಲವಾರು ಮೊನೆಗಳುಂಟು.

	ನೀರುನಾಯಿ ತುಂಬ ಸೊಗಸಾಗಿ ಈಜ ಬಲ್ಲದು. ಈಜುವಾಗ ಬಾಲವನ್ನು ಚುಕ್ಕಾಣಿಯಂತೆ ಬಳಸಿಕೊಳ್ಳುತ್ತದೆ. ರಾತ್ರಿ ಹಗಲು ಎರಡು ಕಾಲಗಳಲ್ಲೂ ಚಟುವಟಿಕೆಯಿಂದ ಕೂಡಿರುತ್ತದೆ. ಇದರ ಪ್ರಧಾನ ಆಹಾರ ಮೀನು. ಕಪ್ಪೆ, ನೀರಾಮೆ, ಸೀಗಡಿ ಮುಂತಾದವು. ಕೆಲವೊಮ್ಮೆ ಹಕ್ಕಿಗಳನ್ನೂ ಸಣ್ಣಪುಟ್ಟ ನೆಲವಾಸಿ ಸ್ತನಿಗಳನ್ನೂ ಬೇಟೆಯಾಡುವುದಿದೆ. ಆಹಾರವನ್ನರಸುವುದು ಒಂಟೊಂಟಿಯಾಗಿ. ಕೆಲವೊಮ್ಮೆ ಜೊತೆಜೊತೆಯಾಗಿ. ನದಿಯ ದಂಡೆಗಳನ್ನು ಕೊರೆದು ಬಿಲ ರಚಿಸುತ್ತದೆ. ಒಣಸಸ್ಯಗಳನ್ನು ಸಂಗ್ರಹಿಸಿ ಬಿಲಗಳ ಗೋಡೆಗಳಿಗೆ ಮೆತ್ತುವ ಪರಿಪಾಠಿಯೂ ಉಂಟು. ನೀರುನಾಯಿ ವರ್ಷಕ್ಕೊಮ್ಮೆ ಮರಿ ಹಾಕುತ್ತದೆ. ಒಂದು ಸೂಲಿಗೆ 2-3 ಮರಿಗಳು ಹುಟ್ಟುವುವು. ಮರಿಗಳ ಪಾಲನೆಯನ್ನು ತಾಯಿ ತುಂಬ ಚೆನ್ನಾಗಿ ನಡೆಸುತ್ತದೆ. ಮರಿಗಳಿಗೆ ಒಂದು ವರ್ಷ ವಯಸ್ಸಾಗುವವರೆಗೂ ತಾಯಿ ಅವನ್ನು ಸಾಕುತ್ತಿದ್ದು ಅವಕ್ಕೆ ಈಜುವುದು, ಬೇಟೆಯಾಡುವುದು ಮುಂತಾದ ಚಟುವಟಿಕೆಗಳನ್ನು ಕಲಿಸುತ್ತದೆ. ನೀರುನಾಯಿ ಪ್ರಾಣಿಸಂಗ್ರಹಾಲಯಗಳಲ್ಲಿ ಸುಮಾರು 20 ವರ್ಷ ಬದುಕಿದ ದಾಖಲೆಗಳಿವೆ.
(ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ